ಐಸಿಸ್: ಈಜಿಪ್ಟ್ ದೇಶದ ಪುರಾಣ ಕಥೆಗಳಲ್ಲಿ ಬರುವ ಪ್ರಸಿದ್ಧ ದೇವತೆ. ಪ್ರ.ಶ.ಪು.1500ರ ಹಿಂದೆಯೇ ಈ ದೇವತೆಯ ಆರಾಧನೆ ರೂಢಿಯಲ್ಲಿತ್ತು.ಪುರಾಣದ ಪ್ರಕಾರ ಈಕೆ ಗೆಬ್ ಮತ್ತು ನಟ್ ಎನ್ನುವವರ ಮಗಳು. ಈಕೆಗೆ ಒಬ್ಬಳು ಸಹೋದರಿ. ನೆಫ್ತಿಸ್ ಎಂದು ಆಕೆಯ ಹೆಸರು. ಹಾಗೆಯೇ ಒಸೈರಿಸ್ ಮತ್ತು ಸೆತ್ ಎನ್ನುವವರು ಸಹೋದರರು. ತನ್ನ ಸಹೋದರನಾದ ಒಸೈರಿಸ್ನನ್ನೇ ಮದುವೆ ಮಾಡಿಕೊಂಡು, ಆತನ ಮೂಲಕ ಹೋರಸ್ ಎನ್ನುವ ಮಗನನ್ನು ಪಡೆದವಳೆಂದು ಕಥೆ. ಅಣ್ಣ ತಮ್ಮಂದಿರ ಜಗಳದಲ್ಲಿ ಸೆತ್ ಎನ್ನುವವ ಐಸಿಸಳ ಗಂಡನಾದ ಒಸೈರಿಸನನ್ನು ಕೊಂದು ಆತನ ದೇಹವನ್ನು ತುಂಡು ತುಂಡು ಮಾಡಿ ಈಜಿಪ್ಟ್ ದೇಶದಾದ್ಯಂತ ಚೆಲ್ಲಿಸಿದನೆಂದು ಕಥೆ. ಐಸಿಸಳು ತನ್ನ ಗಂಡನ ಈ ದಾರುಣ ಅಂತ್ಯದಿಂದ ನೊಂದವಳಾಗಿ ಅವನ ದೇಹದ ಭಾಗಗಳನ್ನು ಹುಡುಕಿ ಅವನ್ನು ಒಟ್ಟಿಗೆ ಕೂಡಿಸಿ ಮೇಣವನ್ನು ಹಚ್ಚಿ ಪ್ರಾಣವನ್ನು ಬರಿಸುತ್ತಾಳೆ. ಇದು ಈಕೆಯ ಶಕ್ತಿಯ ನಿದರ್ಶನ ಎಂದು ಪುರಾಣ ಹೇಳುತ್ತದೆ. ಇದೇ ಸಂದರ್ಭದಲ್ಲೇ ಈಕೆ ತನ್ನ ಮಗನಾದ ಹೋರಸ್ನನ್ನು ಹೆತ್ತದ್ದು. ತನ್ನ ಸಹೋದರ ಸೆತ್ನ ಭಯದಿಂದಾಗಿ ಈಕೆ ಹೋರಸ್ನನ್ನುನೈಲ್ ನದಿಯ ಅಂಚಿನಲ್ಲಿ ಬೆಳೆದ ಪೊದೆಗಳಲ್ಲೇ ಬಚ್ಚಿಟ್ಟು ಸಾಕುತ್ತಾಳೆ. ಹೋರಸ್ಸನು ದೊಡ್ಡವನಾಗಿ ಬಲಿಷ್ಠನಾದ ಮೇಲೆ ತನ್ನ ತಂದೆಯನ್ನು ಹತ್ಯೆ ಮಾಡಿದನಲ್ಲದೆ, ತನ್ನ ತಾಯಿಗೆ ಕಿರುಕುಳವನ್ನು ಕೊಟ್ಟ ಸೆತ್ನ ಮೇಲೆ ಕಾಳಗ ಮಾಡಿ ಅವನನ್ನು ಸೋಲಿಸಿ ಬಂಧಿಸಿ ತಾಯಿ ಹತ್ತಿರಕ್ಕೆ ತರುತ್ತಾನೆ. ಆದರೆ ಕರುಣಾಮಯಿಯಾದ ಆಕೆ ಸೆತ್ನನ್ನು ಕೊಲ್ಲಲಾಗದೆಂದು ಹೇಳುತ್ತಾಳೆ. ಅದರಿಂದ ಕುಪಿತನಾದ ಹೋರಸ್ ತಲೆಗೆ ಬಲವಾದ ಪೆಟ್ಟನ್ನು ಕೊಡುತ್ತಾನೆ. (ಕೆಲವರು ಹೇಳುವಂತೆ ತಲೆಯನ್ನೇ ಕಡಿಯುತ್ತಾನೆ.) ಆದರೆ ಶಾಪಗ್ರಸ್ತನಾಗಿ ತನ್ನ ಕೈಗಳನ್ನು ಕಳೆದುಕೊಳ್ಳುತ್ತಾನೆ. ಐಸಿಸ್ ಕರುಣಾಮಯಿಯೆಂದೂ ಪ್ರೇಮಮಯಿಯೆಂದೂ ಅತೀವ ದೈವಿಕಶಕ್ತಿಯನ್ನು ಪಡೆದಿದ್ದವಳೆಂದೂ ಎಲ್ಲರ ಆರಾಧ್ಯದೇವತೆಯಾಗಿ ಪುಜೆ ಪಡೆಯುತ್ತಾಳೆ. ಈಜಿಪ್ಟ್ ದೇಶದ ಧಾರ್ಮಿಕ ಇತಿಹಾಸದಲ್ಲಿ ಈಕೆಯ ಹೆಸರು ಬಹು ಪ್ರಮುಖವಾದುದು.
ಈಕೆಯ ಕೀರ್ತಿ ಈಜಿಪ್ಟ್ ದೇಶವನ್ನು ಮೀರಿ ನೆರೆಹೊರೆಯ ದೇಶಗಳಿಗೂ ಹಬ್ಬಿ ಯುರೋಪನ್ನೆಲ್ಲ ಆವರಿಸಿದಂತೆ ಕಂಡುಬರುತ್ತದೆ. ಪ್ರ.ಶ.ಪು. 333ರಲ್ಲಿ ಗ್ರೀಕ್ ದೇಶದ ಪಿರಾಸ್ ಎನ್ನುವಲ್ಲಿ ಈಕೆಗೆ ಒಂದು ದೇವಾಲಯ ನಿರ್ಮಿಸಿದ್ದುಂಟು. ಹಾಗೆಯೇಅಥೆನ್ಸ್ ನಗರದಲ್ಲೂ ಈಕೆಗೆ ಸ್ವಾಗತ ಸಿಕ್ಕಿತು. ಪಾಂಪೆಯ ದೊರೆ ಈಕೆಗೆ ಮೀಸಲಾದ ಒಂದು ದೇವಾಲಯ ನಿರ್ಮಿಸಿದನೆಂದು ಗೊತ್ತಾಗುತ್ತದೆ. ಕಾಲಕ್ರಮೇಣ ಈಕೆಯ ಆರಾಧನೆಸಿಸಿಲಿ,ಸಾರ್ಡೀನಿಯ,ಮೊರಾಕೊ,ಸ್ಪೇನ್,ಫ್ರಾನ್ಸ್,ಬ್ರಿಟನ್,ಜರ್ಮನಿ, ಡಾನ್ಯೂಬ್ ತೀರದ ದೇಶಗಳು-ಹೀಗೆ ಎಲ್ಲೆಡೆಯಲ್ಲೂ ಹಬ್ಬಿತು. ಈ ವೇಳೆಗೆ ಈ ದೇವತೆ ವಿಶ್ವಮಾತೃ ಎಂದಾಗಿ ಪರಿಗಣಿಸಲ್ಪಟ್ಟು, ಎಲ್ಲರನ್ನೂ ಪವಿತ್ರಗೊಳಿಸುವ, ಎಲ್ಲರಿಗೂ ಅಮೃತತ್ತ್ವವನ್ನು ನೀಡುವ ಮಹಾಮಾತೆಯೆಂದು ಪುಜೆ ಪಡೆದಿದ್ದಳು. ಈಜಿಪ್ಟ್ ದೇಶದ ಪುರಾಣಕಥೆಗಳನ್ನು ಬಿಟ್ಟರೆ ಈ ದೇವತೆಯ ಮಹತ್ವವನ್ನು ತಿಳಿಸುವ ಮೂಲಗಳಲ್ಲಿ ಮುಖ್ಯವಾದುದು ಪ್ಲುಟಾರ್ಕ್ ಕವಿ ಬರೆದ ಡಿ ಐಸೈಡ್ ಎಟ್ ಓಸಿರೈಡ್ ಎನ್ನುವ ಗ್ರಂಥ. ಐಸಿಸ್ ದೇವತೆಯ ಕಲ್ಪನೆಯ ಆಧಾರದ ಮೇಲೆಯೇ ವರ್ಜಿನ್ ಮೇರಿ ಮತ್ತು ಮಡೋನ ಇವರ ಕಲ್ಪನೆಗಳೂ ಹುಟ್ಟಿರಬಹುದೆಂದು ಅನೇಕರ ಅಭಿಪ್ರಾಯ.